ಸಮ್ಮಿಳಿತ - 
	ವಿಭಿನ್ನ ಗುಣಗಳಿರುವ ಹಲವು ವಸ್ತು ಯಾ ವ್ಯವಸ್ಥೆಗ ಳನ್ನು ಅಪೇಕ್ಷಿತ ಗುಣಗಳಿರುವ ವಸ್ತುವಾಗಿ ಒಗ್ಗೂಡಿಸಿದಾಗ ದೊರೆವ ವಸ್ತು (ಕಾಂಪೊಸಿಟ್). ಸಮ್ಮಿಳಿತಗಳನ್ನು ಎರಡು ಬಗೆಗಳಾಗಿ ವಿಂಗಡಿಸಿದೆ: ವಸ್ತು ಸಮ್ಮಿಳಿತಗಳು (ಮೆಟೀರಿಯಲ್ ಕಾಂಪೊಸಿಟ್ಸ್, ಸಮ್ಮಿಳಿತ ವಸ್ತುಗಳು) ಮತ್ತು ನಿರ್ಮಾಣ ಸಮ್ಮಿಳಿತಗಳು (ಕನ್‍ಸ್ಟ್ರಕ್ಷನ್ ಕಾಂಪೊಸಿಟ್ಸ್, ಸಮ್ಮಿಳಿತ ನಿರ್ಮಾಣಗಳು). ವಸ್ತು ಸಮ್ಮಿಳಿತಗಳನ್ನು ಸರಳವಾಗಿ ಸಮ್ಮಿಳಿತಗಳು ಎನ್ನುತ್ತೇವೆ. 

	ರಚನೆ: ಪ್ರತಿಯೊಂದು ವಸ್ತುವಿಗೂ ಅದರದೇ ಆದ ಗುಣಧರ್ಮಗ ಳಿರುವುವು. ನಮ್ಮ ಅಪೇಕ್ಷಿತ ಗುಣಧರ್ಮಗಳೆಲ್ಲವೂ ಅದರಲ್ಲಿರುವುದಿಲ್ಲ. ಈ ಕೊರತೆಗಳನ್ನು ಪೂರೈಸಿಕೊಳ್ಳಲು, ಹೇರಳವಾಗಿ ದೊರೆಯುವ ಮೂಲವಸ್ತುವಿನೊಂದಿಗೆ ಕೆಲವು ವಿಶೇಷವಸ್ತುಗಳನ್ನೂ ಬೆರೆಸಿ, ಸಮ್ಮಿಳಿತ ಗಳನ್ನು ಪಡೆಯಲಾಗುವುದು. ಈ ವಿಭಿನ್ನ ವಸ್ತುಗಳು ರಾಸಾಯನಿಕವಾಗಿ ಮಿಳಿತವಾಗುವುದಿಲ್ಲ. ಸಮ್ಮಿಳಿತಗಳಲ್ಲಿ ಅವು ತಮ್ಮ ತಮ್ಮ ಗುಣಧರ್ಮಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ. 

	ಗುಣಗಳು: ಅಧಿಕ ತ್ರಾಣ, ಸ್ಥಿರತೆ, ಪೆಡಸುತನ, ಶಾಖನಿರೋಧಕತೆ, ತೇವದಿಂದ ಬಾಧಿತವಾಗದಿರುವುದು, ರಾಸಾಯನಿಕ ಕ್ಷರಣರಾಹಿತ್ಯ, ಧಕ್ಕೆ ಮತ್ತು ಸ್ಫೋಟನಿರೋಧಕತೆ ಮುಂತಾದವು ಸಮ್ಮಿಳಿತಗಳ ಮುಖ್ಯ ಗುಣಗಳು. ತೂಕವೂ ಬೆಲೆಯೂ ಕಡಿಮೆ. ಮಾತೃಕೆ (ಮೆಟ್ರಿಕ್ಸ್), ಪ್ರಬಲನ (ರಿಇನ್‍ಫೋರ್ಸ್‍ಮೆಂಟ್), ಯುಗ್ಮನಾಂಗ (ಕಪ್ಲಿಂಗ್ ಏಜೆಂಟ್) ಮತ್ತು ಪೂರಕ (ಫಿûಲ್ಲರ್)-ಇವು ಸಮ್ಮಿಳಿತಗಳ ಪರಿಕರಗಳು. ಮಾತೃಕೆಯೇ ಈ ಪೈಕಿ ಮುಖ್ಯವಾದುದು. ಇದಕ್ಕೆ ಬಂಧಕ (ಬೈಂಡರ್) ಎಂದೂ ಹೆಸರಿದೆ. ಇದರೊಂದಿಗೆ ನಿಯತ ಪರಿಮಾಣದಲ್ಲಿ ಪ್ರಬಲನವನ್ನು ಬೆರೆಸಲಾಗುವುದು. ಇವೆರಡರ ನಡುವೆ ಯುಗ್ಮನಾಂಗ ದೃಢ ಬಂಧವನ್ನುಂಟುಮಾಡುವುದು. ಮಾತೃಕೆ ಮತ್ತು ಪ್ರಬಲನಗಳು ಒಗ್ಗೂಡಿ ಸಮ್ಮಿಳಿತವಾಗಿರಲು ಯುಗ್ಮನಾಂಗ ಅತ್ಯವಶ್ಯ. ಮಾತೃಕೆ ಪ್ಲಾಸ್ಟಿಕ್ (ರಾಳ), ಲೋಹ ಅಥವಾ ಸೆರಾಮಿಕ್ ಆಗಿರಬಹುದು. ಮಾತೃಕೆಯಾಗಿ ಪ್ಲಾಸ್ಟಿಕ್ ಇಂದು ಶೇಕಡಾ 95ರಷ್ಟು ಉಪಯೋಗದಲ್ಲಿದೆ. ಇವು ಬಹುಪಾಲು ಥರ್ಮೋಸೆಟ್ ರಾಳಗಳು. ಇಪಾಕ್ಸಿ, ಪಾಲಿಎಸ್ಟರ್, ವೀನೈಲ್ ಎಸ್ಟರ್, ಫಿûೀನಾಲ್-¥sóÁರ್ಮಾಲ್ಡೀಹೈಡ್, ಸಿಲಿಕೋನ್‍ಗಳು, ಪಿವಿಸಿ, ಪಾಲಿಪ್ರೊಪಿಲೀನ್ ಮುಂತಾದವು ಬಳಕೆಯಲ್ಲಿವೆ. ಲೋಹಗಳ ಪೈಕಿ ಅಲ್ಯೂಮಿನಿಯಮ್ ಹೆಚ್ಚು ಉಪಯುಕ್ತವಾಗಿದೆ. ಮೆಗ್ನೀಸಿಯಮ್, ಸೀಸ, ಟೈಟಾನಿಯಮ್, ನಿಕ್ಕಲ್ ಕೂಡ ವಿಶೇಷ ಸನ್ನಿವೇಶಗಳಲ್ಲಿ ಬಳಕೆಯಾಗುತ್ತವೆ. 

	ಪ್ರಬಲನಗಳು ಸಮ್ಮಿಳಿತಗಳಲ್ಲಿ ಸ್ನಾಯುಗಳಿದ್ದಂತೆ. ಅವು ಸಾಮಥ್ರ್ಯವನ್ನೂ ಪೆಡಸುತನವನ್ನೂ ಒದಗಿಸುತ್ತವೆ. ತಂತು ಪ್ರಬಲನ ಮತ್ತು ಅತಂತು ಪ್ರಬಲನವೆಂಬ ಎರಡು ಬಗೆಗಳಿವೆ. ಮೊದಲಿನವನ್ನು ಉಕ್ಕು, ಗಾಜು, ಕಾರ್ಬನ್, ಬೋರಾನ್, ಪಾಲಿಮರ್, ಕಲ್ನಾರುಗಳಿಂದ ತಯಾರಿಸುವರು. ಎರಡನೆಯವನ್ನು ಕ್ಯಾಲ್ಶಿಯಮ್ ಕಾರ್ಬೊನೇಟ್, ಕ್ಯಾಲ್ಸಿಯಮ್ ಸಿಲಿಕೇಟ್, ಸಿಲಿಕಾನ್, ಅಲ್ಯೂಮಿನಿಯಮ್ ಅಥವಾ ಟೈಟಾನಿಯಮ್ ಆಕ್ಸೈಡುಗಳು, ಕ್ಯಾಲ್ಸಿಯಮ್ ಮತ್ತು ಬೇರಿಯಮ್ ಸಲ್ಫೇಟುಗಳು, ಕಾರ್ಬನ್ ಬ್ಲ್ಯಾಕ್, ಅಭ್ರಕ, ಗಾಜಿನ ಅಥವಾ ಪಿಂಗಾಣಿ ಗುಂಡುಗಳಿಂದ ತಯಾರಿಸುತ್ತಾರೆ. ಮೆಥಾಕ್ರಿಲೇಟ್ ಕ್ರೋಮಿಕ್ ಕ್ಲೋರೈಡ್, ಸೈಲೇನ್‍ಗಳು, ಟೈಟಾನೇಟ್‍ಗಳು ಅಥವಾ ಅಲ್ಯುಮಿನೇಟ್‍ಗಳಿಂದ ಯುಗ್ಮನಾಂಗಗಳನ್ನು ತಯಾರಿಸುವರು. ಪೂರಕಗಳ ಘಟಕಗಳಿವು: ಕ್ಯಾಲ್ಸಿಯಮ್ ಕಾರ್ಬೊನೇಟ್, ಕೆಯೊಲಿನ್, ವಾಲ್ಕ್ ಮತ್ತು ಬೇರಿಯಮ್ ಸಲ್ಫೇಟ್.

	ಉಪಯೋಗಗಳು: ಸಮ್ಮಿಳಿತಗಳಿಂದ ನಮಗೆ ಅವಶ್ಯವಾಗುವ ಗುಣಗಳನ್ನು ಪಡೆಯಬಹುದು. ಎಂದೇ ಉದ್ಯಮಗಳಲ್ಲಿ  ಯಾ ಜನೋಪಯೋಗೀ ವಸ್ತುಗಳ ತಯಾರಿಕೆಯಲ್ಲಿಯೂ ಅವುಗಳಿಗೆ ವಿಶೇಷ ಸ್ಥಾನವಿದೆ. ಸಾರಿಗೆ, ಸಾಗಣೆ, ಸಾಗರ ಎಂಜಿನಿಯರಿಂಗ್ ಮುಂತಾದ ನಿರ್ಮಾಣಕ್ಷೇತ್ರಗಳಲ್ಲಿ ಅಪಾರ ಬಳಕೆಯುಂಟು. ವ್ಯೋಮಯಾನ ಕ್ಷೇತ್ರದಲ್ಲಿ ಇವಿಲ್ಲದೆ ಸಾಧ್ಯವೇ ಇಲ್ಲ. ವೈವಿಧ್ಯಮಯವಾದ ಸಮ್ಮಿಳಿತಗಳನ್ನು ಉಪಜ್ಞಿಸುತ್ತಿದ್ದಾರೆ. ಇವು ಬಳಕೆಯಾಗುತ್ತಿರುವ ವಿವಿಧ ಕ್ಷೇತ್ರಗಳು: ವಿಮಾನೋದ್ಯಮ, ರಕ್ಷಣಾ ಉಪಕರಣೋದ್ಯಮ, ವ್ಯೋಮವಾಹನಗಳು; ಜೈವ ವೈದ್ಯಕೀಯ (ಬಯೊಮೆಡಿಕಲ್) ಕ್ಷೇತ್ರ; ರೇಲ್ವೇ ಬೋಗಿಗಳ ನಿರ್ಮಾಣ; ಎಲೆಕ್ಟ್ರಾನಿಕ್ಸ್ ಉದ್ಯಮ; ಹೈಟೆಕ್ ಸೈಕಲ್ ಉದ್ಯಮ; ಆಟೊಮೊಬೈಲ್ ಉದ್ಯಮ, ಭಾರೀ ಟ್ಯಾಂಕರುಗಳು; ವ್ಯೋಮನೌಕೆ; ಕೃತಕ ಕಾಲು ಇತ್ಯಾದಿ. ಸಿವಿಲ್ ಎಂಜಿನಿಯರಿಂಗ್ ನಿರ್ಮಾಣಗಳಲ್ಲಿ ಸಮ್ಮಿಳಿತಗಳು ಅವಿಭಾಜ್ಯ ಘಟಕಗಳಾಗಿವೆ. 

	ನಡೆದುಬಂದ ದಾರಿ: ನಿಸರ್ಗ ಕೋಟ್ಯಂತರ ವರ್ಷಗಳ ಹಿಂದಿನಿಂದ ಕಡಲ ಜೊಂಡು, ಬೊಂಬು, ಮಾನವ ಎಲುಬು ಮುಂತಾದವುಗಳ ರೂಪದಲ್ಲಿ ಸಮ್ಮಿಳಿತಗಳನ್ನು ಸೃಷ್ಟಿಸುತ್ತ ಬಂದಿದೆ. ಮಾನವನಿರ್ಮಿತ ಸಮ್ಮಿಳಿತಗಳು ಪ್ರಾಯಶಃ ಈಜಿಪ್ಟಿನಲ್ಲಿ ಪ್ರಾರಂಭವಾದುವಾಗಿವೆ. ಅವರು ಒಂದು ವಿಧದ ಪದರು ಹಲಗೆಯನ್ನು ತಯಾರಿಸುತ್ತಿದ್ದರು. ಪುರಾತನ ಇಸ್ರೇಲಿಯರು ತೃಣಪ್ರಬಲಿತ ಮಣ್ಣಿನ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಮಣ್ಣು ಗೋಡೆ ಕಟ್ಟಲು ಮಣ್ಣಿನೊಂದಿಗೆ ನಾರು ಬೆರೆಸುವುದು ಈಗಲೂ ರೂಢಿಯಲ್ಲಿದೆ. 13ನೆಯ ಶತಮಾನದಲ್ಲಿ ಮಂಗೋಲಿಯನ್ನರು ತಮ್ಮ ಬಿಲ್ಲುಗಳಿಗೆ ಜೈವಿಕ ಸ್ನಾಯುಗಳನ್ನೂ (ಟೆಂಡನ್), ಚೌಬೀನೆ, ರೇಷ್ಮೆ ಮತ್ತು ಅಂಟುಗಳಿಂದ ಸಿದ್ಧಪಡಿಸಿದ ವಸ್ತುಗಳನ್ನೂ ಬಳಸುತ್ತಿದ್ದರು. ಮಧ್ಯಯುಗದಲ್ಲಿ ಕತ್ತಿ, ಗುರಾಣಿ, ಕವಚಗಳನ್ನು ಸಮ್ಮಿಳಿತಗಳಿಂದ ತಯಾರಿಸುತ್ತಿ ದ್ದರು. ವಿಮಾನೋದ್ಯಮ ಪ್ರಾರಂಭವಾದಾಗಿನಿಂದ ಹಗುರ ಆದರೆ ಸಾಮಥ್ರ್ಯ ಯುಕ್ತವಾದ, ಶಾಖ ಮತ್ತು ತೇಯ್ತನಿರೋಧಿ ವಸ್ತುಗಳ ಆವಶ್ಯಕತೆ ಯೇರ್ಪಟ್ಟು, ನಾನಾ ವಿಧದ ಸಮ್ಮಿಳಿತಗಳನ್ನು ಉಪಜ್ಞಿಸಲಾಯಿತು. ಇದರ ಫಲವೇ ವೈವಿಧ್ಯಮಯ ಸಮ್ಮಿಳಿತಗಳ ಪ್ರವಾಹ. 

	ಸಿಮೆಂಟ್ ಕಾಂಕ್ರೀಟಿನ ಮತ್ತು ಉಕ್ಕಿನ ಉತ್ಕøಷ್ಟ ಗುಣಗಳನ್ನು ಮನಗಂಡು, ಉಕ್ಕಿನ ಸರಳುಗಳನ್ನು ಕಾಂಕ್ರೀಟಿನಲ್ಲಿ ಹುದುಗಿಸಿ, ಅತಿ ದೃಢ ಲೋಕೋಪಯೋಗೀ ಸಮ್ಮಿಳಿತವಾದ ಪ್ರಬಲಿತ ಸಿಮೆಂಟ್ ಕಾಂಕ್ರೀಟನ್ನು (ಆರ್‍ಸಿಸಿ) ಫ್ರಾನ್ಸಿನ ಹೆನ್ನಿಬೇಕ್ 1890ರಲ್ಲಿ ಸಿದ್ಧಪಡಿಸಿದ. 1910ರಲ್ಲಿ ಪೋರ್ಟಿರ್ ತಂತುಪ್ರಬಲಿತ ಕಾಂಕ್ರೀಟಿನ ತಾತ್ವಿಕ ಉಗಮಕ್ಕೆ ಕಾರಣನಾಗಿ, 1913ರಲ್ಲಿ ರೋಮುದಾಲ್ಡಿ ಮತ್ತು ಬ್ಯಾಟ್ಸನ್‍ರು ಉಕ್ಕಿನ ತಂತುಪ್ರಬಲಿತ ಕಾಂಕ್ರೀಟಿನ ವ್ಯಾಪಕ ಉಪಯೋಗಕ್ಕೆ ಚಾಲನೆ ನೀಡಿದರು. 

	ಕಾಲಕ್ರಮೇಣ ವಿಶಿಷ್ಟ ವಸ್ತುಗಳ ಆವಶ್ಯಕತೆ ಹೆಚ್ಚುತ್ತಿದ್ದಂತೆ, ವಿವಿಧ ರೀತಿಯ ಮಾತೃಕೆಗಳು, ಪ್ರಬಲನಗಳಿಂದ ಕೂಡಿದ ಸಮ್ಮಿಳಿತಗಳು ಅಪಾರ ಸಂಖ್ಯೆಯಲ್ಲಿ ಉಪಯೋಗಕ್ಕೆ ಬರುತ್ತಿವೆ. ಈಗ ಸಮ್ಮಿಳಿತಗಳು ಉತ್ಪನ್ನಗಳಲ್ಲದೇ, ಗೃಹೋಪಯೋಗೀ, ಮನೋರಂಜಕ, ಕ್ರೀಡಾ ಸಲಕರಣೆಗಳು ಮುಂತಾದವುಗಳಿಗೆ ಅತ್ಯವಶ್ಯ ಪದಾರ್ಥಗಳು.		
		(ಎಮ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ